ಮುಂಬಯಿ, ಜು.06: ಮಾಧ್ಯಮವು ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸಮಾಜದ ಧ್ವನಿಯನ್ನು ಎತ್ತುವ ಮೂಲಕ ಜನರ ಸ್ವಾತಂತ್ರವನ್ನು ಕಾಪಾಡುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ಅಭಿಪ್ರಾಯದ ದೃಷ್ಟಿಕೋನವಿಲ್ಲದೆ ವಾಸ್ತವಿಕ ಮಾಹಿತಿಯನ್ನು ಒದಗಿಸುವ ಜವಾಬ್ದಾರಿ ಪತ್ರಕರ್ತರು ಹೊಂದಿದ್ದು ಪತ್ರಕರ್ತರು ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರಧಾನರು. ಪತ್ರಕರ್ತರಾದ ತಾವೂ ಇದೇ ರೀತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇರಬೇಕು. ತಾವೆಲ್ಲ ಸಮಾಜವನ್ನು ತಿದ್ದುವ ಉತ್ತಮ ಕೆಲಸ ಮಾಡುತ್ತಾ ಬಂದಿದ್ದೀರಿ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೊರೇಟ್ ಕ್ಲಬ್ ಹೌಸ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಆಯೋಜಿಸಿದ್ದ ಸಂಘದ 2022 ಮತ್ತು 2023ನೇ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತ ರಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್.ವಿ ಅವಿೂನ್ ಮತ್ತು ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಪತ್ರಕರ್ತರ ಸಂಘದ 2022 ಮತ್ತು 2023ನೇ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಲಾರೇನ್ಸ್ ಕುವೆಲ್ಹೋ ಮುಂಬಯಿ (ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕರು) ಹಾಗೂ ಸನತ್ ಕುಮಾರ ಬೆಳಗಲಿ (ಜಮಖಂಡಿ, ಬಾಗಲಕೋಟೆ) ಇವರಿಗೆ ಕ್ರಮವಾಗಿ ಶಾಲು ಹೊದಿಸಿ, ರೂ.25,000 ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಪವನ್ನಿತ್ತು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಕಪಸಮ ಪ್ರಕಾಶಿತ ಪ್ರಥಮ ಕೃತಿ, ಸಂಘದ ಸಲಹಾ ಸಮಿತಿಯ ಹಿರಿಯ ಸದಸ್ಯೆ ನ್ಯಾಯವಾದಿ ರೋಹಿಣಿ ಜೆ.ಸಾಲಿಯಾನ್ ರಚಿತ ದಿವ್ಯಾಂಗನೆ ಕವನ ಸಂಕಲನವನ್ನು ಡಾ| ಸುನೀತಾ ಎಂ.ಶೆಟ್ಟಿ ಬಿಡುಗಡೆ ಗೊಳಿಸಿದರು. ರೋಹಿಣಿ ಬದುಕು ಮತ್ತು ಕವನ ಸಂಕಲನದ ಬಗ್ಗೆ ಸಂಘದ ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ತಿಳಿಸಿ ಪುರಸ್ಕೃತರನ್ನು ಅಭಿನಂದಿಸಿದರು.

ಕೆ.ವಿ ಪ್ರಭಾಕರ್ ಮಾತನಾಡಿ ಮರಾಠಿ ನೆಲದಲ್ಲಿ ಕನ್ನಡದ ಕಂಪು ಬೀರುವ ಕೆಲಸವನ್ನು ಮುಂಬಯಿ ಪತ್ರಿಕೋದ್ಯಮ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಕನ್ನಡಿಗರು ಒಳನಾಡು ಹೊರನಾಡು ಅಥವಾ ಹೊರದೇಶದಲ್ಲಿ ನೆಲೆಸಿದರೂ ಅವರು ಕನ್ನಡಿಗರೇ. ವಾರದ ಎಲ್ಲ ದಿನಗಳಲ್ಲಿ ದುಡಿಯುವ ಸದಾ ಕಾಯಕಜೀವಿ ನಮ್ಮ ಕನ್ನಡ ಪತ್ರಕರ್ತರು. ಸಮಾಜಕ್ಕೆ ಹಿತ ಉಂಟುಮಾಡುವ ಸುದ್ದಿಗಳನ್ನು ಪತ್ರಕರ್ತನು ಕೊಡಬೇಕು. ಪತ್ರಕರ್ತನ ಮುಂದೆ ಅನೇಕ ಸವಾಲುಗಳಿದ್ದು ದೇಶ ಕಟ್ಟುವ ಕೆಲಸ ಪತ್ರಕರ್ತರ ಕೈಯಲ್ಲಿದೆ. ಹಾಗಾಗಿ ಪತ್ರಕರ್ತರ ಜವಾಬ್ದಾರಿ ಪತ್ರಕರ್ತರು ಹಿರಿಯದು ಎಂದರು.

ಸುಳ್ಳು ಸುದ್ಧಿಗಳ ನಡುವೆ ಸತ್ಯ ಸುದ್ದಿಗಳನ್ನು ಆಯ್ದು ಪ್ರಕಟಿಸುವ ಜವಾಬ್ದಾರಿ ಪತ್ರಕರ್ತನದ್ದು. ಆದ್ದರಿಂದ ಪತ್ರಕರ್ತರಲ್ಲಿ ಭಾವನೆಗಳ ಚಿಂತನೆ ನಡೆಯಬೇಕು. ಪತ್ರಕರ್ತನಿಗೆ ದಿನದಲಿತರ ನೋವು ನಲಿವುಗಳಿಗೆ ಸ್ಪಂದಿಸುವ ದೊಡ್ಡಗುಣ ಇದ್ದು ಪತ್ರಕರ್ತನು ತನ್ನದೆ ಆದ ಸಿದ್ದಾಂತಗಳನ್ನು ರೂಪಿಸಿಕೊಂಡು ಅದನ್ನು ಪಾಲಿಸಿಕೊಂಡು ಹೋಗಬೇಕು. ಸಮಯ ಪ್ರಜ್ಞೆ ಮತ್ತು ಮಾನವ ಪ್ರಜ್ಞೆ ಪತ್ರಕರ್ತನಿಗೆ ಇರಬೇಕು. ಜೊತೆಗೆ ಸಮಾಜಕ್ಕೆ ಏನೇನು ಬೇಕು ಬೇಡಗಳ ಅರಿವು ತಿಳಿಯಲು ರಾಜಕೀಯ ನಂಟು ಪತ್ರಕರ್ತರು ಹೊಂದಿರಬೇಕು ಎಂದು ತಗಡೂರು ತಿಳಿಸಿದರು.

ಎಲ್.ವಿ ಅವಿೂನ್ ಮಾತನಾಡಿ ಮುಂಬಯಿ ಸಂಘ ಸಂಸ್ಥೆಗಳು ಕನ್ನಡವನ್ನು ಕಟ್ಟುವ ಕಾರ್ಯ ಮಾಡುತ್ತಿದೆ. ಅವರ ಜೊತೆ ಜೊತೆಗೆ ಕನ್ನಡಿಗ ಪತ್ರಕರ್ತರ ಸಂಘವೂ ಕೂಡ ಕನ್ನಡದ ಬಾವುಟವನ್ನು ಎತ್ತಿ ಹಿಡಿದಿದೆ. ಕನ್ನಡ ಭಾಷೆಯ ಸೇವೆಯ ಜೊತೆಗೆ ನಾಡು ದೇಶದ ಐಕ್ಯತೆಯ ಮಹತ್ವದ ಕೆಲಸ ಮಾಡಿತ್ತಿದೆ ಎಂಬುದು ಹೆಮ್ಮೆಯ ವಿಷಯ. ಮುಂಬಯಿಯಲ್ಲಿ ಎಲ್ಲ ಜಾತೀಯ ಜನರು ಸಾಮರಸ್ಯದಿಂದ ಬಾಳುವುದಕ್ಕೆ ಪತ್ರಕರ್ತರ ಲೇಖನಿಯಿಂದ ಸಾಧ್ಯವಾಗಿದೆ. ಕನ್ನಡಿಗ ಪತ್ರಕರ್ತರು ಮುಂಬಯಿಯಲ್ಲಿ ಕನ್ನಡದ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದು ಪ್ರಶಂಸನೀಯ. ಎಂದರು.

ಸುನೀತಾ ಶೆಟ್ಟಿ ಪ್ರಶಸ್ತಿಯ ಬಗ್ಗೆ ತಿಳಿಸಿ ಮನುಷ್ಯನು ಏಕಾಕಿತನ ಬಯಸಬಾರದು. ಮನುಷ್ಯನ ಬದುಕು ಹಣತೆಯಂತಿದ್ದು ಸದಾ ಇತರರಿಗೆ ಬೆಳಕು ಕೊಡುವಂತೆ ಇರಬೇಕು. ಗಾಜಿನ ಒಳಗಿನಿಂದ ದೀಪ ಪ್ರತಿಫಲಿಸುವಂತೆ ಕವಿತೆ ಗಾಜಿನ ಕೊಳವೆಯಂತೆ ಇರಬೇಕು. ಹಾಗೆಯೇ ನಮ್ಮ ಭಾವನೆಗಳು ಪ್ರತಿಫಲಿಸಬೇಕು. ರೋಹಿಣಿ ಸಾಲ್ಯಾನ್ ಅವರು ಉತ್ತಮ ಕವಿತೆಗಳನ್ನು ರಚಿಸಿ ಇದನ್ನು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ನಾವು ಬದುಕನ್ನು ಪ್ರೀತಿಸುವಂತೆ ಸಾಹಿತ್ಯ ನಮ್ಮನ್ನು ಎಚ್ಚರಿಸುತ್ತದೆ ಎಂದು ದಿವ್ಯಾಂಗನೆ ಕೃತಿಕರ್ತೆಗೆ ಶುಭಾರೈಸಿದರು.

ಕನ್ನಡಿಗ ಪತ್ರಕರ್ತರ ಸಂಘಕ್ಕೆ ಹದಿನೈದು ವರ್ಷಗಳು ಪೂರ್ಣವಾಯಿತು. ಸಂಘ ಪತ್ರಕರ್ತರನ್ನು ಒಟ್ಟುಗೂಡಿಸುವ ಕಾರ್ಯ ಮಾಡುತ್ತ ಬಂದಿದೆ. ಪತ್ರಕರ್ತರಲ್ಲಿ ಒಗ್ಗಟ್ಟು ಇರಬೇಕು. ಒಂದು ಮನಸ್ಸಿನಿಂದ ಜೊತೆಗೂಡಿ ಸಂಘವನ್ನು ಬಲಪಡಿಸಬೇಕು. ವರದಿಗಳ ಮುಖೇನ ಪರರಿಗೆ ಮಾಡುವ ಸಣ್ಣ ಉಪಕಾರ ಬದುಕನ್ನು ಮತ್ತು ಸಮಾಜವನ್ನೇ ಬದಲಿಸಬಹುದು. ಆದುದರಿಂದ ಪತ್ರಕರ್ತರು ಸಾಮಾಜಿಕ ಕಳಕಳಿ ಹೊಂದಿರಬೇಕು ಎಂದು ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿದರು.

ಈ ಶುಭಾವಸರದಲ್ಲಿ ಪುರಸ್ಕೃತರ ಪರವಾಗಿ ಸುಜನ್ಹಾ ಎಲ್.ಕುವೆಲ್ಲೋ, ಶಶಿಕಲಾ ಸನತ್‍ಕುಮಾರ, ಪತ್ರಕರ್ತ ರಾಹುಲ್ ಬೆಳಗಲಿ, ಬೇಬಿ ಸ್ಮಯನ ರಾಹುಲ್, ಬಿಲ್ಲವರ ಅಸೋಸಿಯೇ ಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಬಾಂಬೇ ಬಂಟ್ಸ್ ಎಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾ| ರಾಜಾ ವಿ. ಸಾಲಿಯಾನ್ ವಿಶೇಷವಾಗಿ ಉಪಸ್ಥಿತರಿದ್ದು ಪುರಸ್ಕೃತರಿಗೆ ಶುಭಾರೈಸಿದರು. ಪ್ರಶಸ್ತಿ ಪುರಸ್ಕೃತರು ಗೌರವಕ್ಕಾಗಿ ಅಭಿವಂದಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಿನ 92ರ ಬಾಳಿನ ಡಾ| ಸುನೀತಾ ಎಂ.ಶೆಟ್ಟಿ, ಸಂಘದ ಸದಸ್ಯರಾಗಿ ದ್ದು ಶಿವಾ’ಸ್ ಕಾಲೇಜ್ (ಸ್ಥಾಪಿಸಿದ) ಕಾರ್ಯಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಗತಸಾಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅರೀಫ್ ಕಲ್ಕಟ್ಟಾ ಮತ್ತು ಹಸೀನಾ ಅರೀಫ್ ದಂಪತಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ನಾಗೇಶ್ ಪೂಜಾರಿ ಏಳಿಂಜೆ, ನಾಗರಾಜ್ ಕೆ.ದೇವಾಡಿಗ, ಸದರಾಮ ಎನ್.ಶೆಟ್ಟಿ, ಶ್ಯಾಮ್ ಎಂ.ಹಂಧೆ, ಸಲಹಾ ಸಮಿತಿ ಸದಸ್ಯರಾದ ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಸುರೇಶ್ ಎಸ್.ರಾವ್, ಸುರೇಂದ್ರ ಎ.ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ವಿಶೇಷ ಆಮಂತ್ರಿತ ಸದಸ್ಯರಾದ ಚಂದ್ರಶೇಖರ ಆರ್.ಬೆಳ್ಚಡ ಸೇರಿದಂತೆ ಸದಸ್ಯರನೇಕರು, ಕೆ.ಟಿ ವೇಣುಗೋಪಾಲ್ ಅಭಿಮಾನಿಗಳು ಉಪಸ್ಥಿತರಿದ್ದರು.

ವಿದ್ಯಾ ಎಂ.ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಸ್ವಾಗತಿಸಿ ಪ್ರಸ್ತಾವನೆಗೈದರು. ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯಾವರ್, ಶ್ಯಾಮ್ ಎಂ.ಹಂಧೆ, ನಾಗೇಶ್ ಪೂಜಾರಿ ಏಳಿಂಜೆ, ಅನಿತಾ ಪೂಜಾರಿ ತಾಕೋಡೆ ಅತಿಥಿಗಳನ್ನು ಪರಿಚಯಿಸಿದರು. ಗೌ| ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಮತ್ತು ಜತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ ಪುರಸ್ಕೃತರನ್ನು ಪರಿಚಯಿಸಿದರು. ಗೋಪಾಲ ತ್ರಾಸಿ ಕಾರ್ಯಕ್ರಮ ನಿರೂಪಿಸಿದರು. ಸಾ.ದಯಾ (ದಯಾನಂದ್) ಉಪಕಾರ ಸ್ಮರಿಸಿದರು.

LEAVE A REPLY

Please enter your comment!
Please enter your name here