ಮುಂಬಯಿ, ಡಿ.12 : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಸಂಸ್ಥೆಯ ಸದಸ್ಯರುಗಳಿಗೆ ಸದಸ್ಯತ್ವ ಗುರುತುಪತ್ರ ಪ್ರದಾನ ಸಮಾರಂಭ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಸಂತಾಪ ಸೂಚನಾಸಭೆಯನ್ನು ನೆರವೇರಿಸಿತು.

ಇಂದಿಲ್ಲಿ ಭಾನುವಾರ ಮಧ್ಯಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಕಪಸಮ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿಸಲಾದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ, ಹಿರಿಯ ಲೇಖಕ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಮತ್ತು ಡಾ| ಕಮಲಾ ಹಂಪನಾ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2010 ಪುರಸ್ಕೃತ ಎಲ್ಲೈಸಿ ಪ್ರಸಿದ್ಧ ಆರ್.ಕೆ ಶೆಟ್ಟಿ, ಪತ್ರಕರ್ತ ಮತ್ತು ಉದ್ಯಮಿ ವಿಠಲ್ ಎಸ್.ಪೂಜಾರಿ ಭಯಂದರ್, ಯುವ ಪ್ರಿಂಟಿಗ್ ಉದ್ಯಮಿ ಜಗಧೀಶ್ ಅವಿೂನ್ ಮತ್ತು ಕಪಸಮ ಸಲಹಾ ಮಂಡಳಿಯ ಸದಸ್ಯರುಗಳಾದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಇವರನ್ನೊಳಗೊಂಡು ಸಂಘದ ಸದಸ್ಯರುಗಳಿಗೆ ಸದಸ್ಯತ್ವ ಗುರುತುಪತ್ರ ಪ್ರದಾನಿಸಿದರು.

ಪತ್ರಕರ್ತರಿಗೆ ಏನೂ ಹೇಳಬೇಕಾಗಿಲ್ಲ. ಅವರು ನಿಪುಣರು. ನಮ್ಮಂತಹ ದಂಪತಿಗಳು ಈ ಮಟ್ಟಕ್ಕೆ ಬರಲು ಪತ್ರಕರ್ತರೇ ಕಾರಣರು. ಸಮಾಜದ ಅರಿವು ಅವರಲ್ಲಿದ್ದು ಅವರನ್ನು ಪ್ರೊತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಸಮಾಜದ ಜವಾಬ್ದಾರಿ ಪತ್ರಕರ್ತರ ಪರಮ ಕರ್ತವ್ಯ ಆಗಲಿ ಎಂದು ಸದಸ್ಯರುಗಳಿಗೆ ಗುರುತುಪತ್ರಗಳನ್ನು ವಿತರಿಸಿ ಪ್ರೊ. ಹಂಪ ನಾಗರಾಜಯ್ಯ ನುಡಿದರು.

ನಂತರ ಆಯೋಜಿಸಲಾಗಿದ್ದ ಸಂತಾಪ ಸೂಚನಾ ಸಭೆಯಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ಭಾರತ್ ಕೋ.ಆಪರೇಟಿವ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಇವರು ಸಂ.ಕು.ಗುಲ್ವಾಡಿ ಭಾವಚಿತ್ರಕ್ಕೆ ಪುಷ್ಫಂಜಲಿಗೈದು ಬಾಷ್ಫಂಜಲಿ ಅರ್ಪಿಸಿದರು. ಹಿರಿಯ ಪತ್ರಕರ್ತ ಮತ್ತು ಕಪಸಮ ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ್ ಕಲಕೋಟಿ ಇವರು ಗುಲ್ವಾಡಿಗೆ ನುಡಿ ನಮನ ಸಲ್ಲಿಸಿದರು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕ ಇದರ ಆಶ್ರಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಹಮ್ಮಿಕೊಂಡಿರುವ ಕುವೆಂಪು ಸಾಹಿತ್ಯ ಉತ್ಸವದ ಸಮಾರೋಪ ಸಮಾರಂಭದ ಕೊನೆಯಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಪಸಮ ಸಲಹಾ ಮಂಡಳಿಯ ಸದಸ್ಯರುಗಳಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಸಿಎ| ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ ಕಟೀಲು, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಮತ್ತು ಅಭಿಜಿತ್ ಪ್ರಕಾಶನ ಮುಂಬಯಿ ಇದರ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ, ಅಕ್ಷಯ ಮಾಸಿಕ ಇದರ ಗೌ| ಸಂಪಾದಕ ಎಂ.ಬಿ.ಕುಕ್ಯಾನ್, ಸಂಪಾದಕ ಈಶ್ವರ್ ಅಲೆವೂರು, ಹರೀಶ್ ಕೆ.ಹೆಜ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಮುಂಬಯಿಯಲ್ಲಿನ ಪತ್ರಕರ್ತರಿಗೆ ಬಿಲ್ಲವರ ಭವನ ಮನೆ ಇದ್ದಂತೆ. ಸದಾ ನಮ್ಮಂತಹ ಪತ್ರಕರ್ತರನ್ನು ಪ್ರೊತ್ಸಾಹಿಸಿ ಸಂಘದ ಬೆಳವಣಿಗೆಗೂ ಸ್ಪಂದಿಸುತ್ತಿದೆ. ಡಾ| ಜಿ.ಎನ್.ಉಪಾಧ್ಯರು ನಮ್ಮೆಲ್ಲರನ್ನು ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಒಂದು ಭಾಗವಾಗಿಯೇ ಹುರಿದುಂಬಿಸುತ್ತಾರೆ. ಇಂದು ಹಂಪನಾ ದಂಪತಿ ನಮ್ಮೊಡನೆಯಿದ್ದು ನಮ್ಮನ್ನು ಹರಸುತ್ತಿರುವುದು ನಮ್ಮ ಭಾಗ್ಯವಾಗಿದೆ. ಸಂಘದ ಇಂತಹ ಎಲ್ಲಾ ಚಟುವಟಿಕೆಗಳನ್ನು ಸದಸ್ಯರೆಲ್ಲರೂ ಮನವರಿಸಿಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಬೆನ್ನೆಲುಬು ಆಗಿ ನಿಲ್ಲಬೇಕು ಎಂದು ಚಂದ್ರಶೇಖರ್ ಪಾಲೆತ್ತಾಡಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು.

ಸದಸ್ಯರು ಗುರುತುಪತ್ರವನ್ನು ದುರುಪಯೋಗ ಪಡಿಸದೆ ವೈಯಕ್ತಿಕವಾಗಿ ಕಳಂಕ ತರದೆ ತಮ್ಮ ಹಾಗೂ ಸಂಸ್ಥೆಯ ಪ್ರತಿಯನ್ನು ಉಳಿಸಿ ಒಗ್ಗಟ್ಟನ್ನು ರೂಪಿಸಿ ಪತ್ರಕರ್ತರ ಒಂದು ಪರಿವಾರವಾಗಿ ಬಾಳುವಂತೆ ಕಪಸಮ ಸ್ಥಾಪಕ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡುತ್ತಾ ಸದಸ್ಯರುಗಳಿಗೆ ಮನವಿ ಮಾಡಿದರು.

ಕಪಸಮ ಕಾರ್ಯದರ್ಶಿ ದಯಾ ಸಾಗರ್ ಚೌಟ ಸ್ವಾಗತಿಸಿದರು. ಕಪಸಮ ಸದಸ್ಯ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಣೆಗೈದರು. ಕಪಸಮ ಕೋಶಾಧಿಕಾರಿ ಜಿ.ಪಿ ಕುಸುಮಾ ಅಭಾರ ಮನ್ನಣೆಗೈದರು.

LEAVE A REPLY

Please enter your comment!
Please enter your name here