ಮುಂಬಯಿ, ಆ.11: ನಾವು ನಿರ್ಮಿಸಲು ಹೊರಟದ್ದು ಪತ್ರಕರ್ತರ ಭವನ ಅನ್ನುದಕ್ಕಿಂತ ಅದು ಪತ್ರಕರ್ತರ ಕ್ಷೇಮಾಭಿವೃದ್ಧಿಯ ತಾಣ ಎಂದಣಿಸಿದ್ದೇನೆ. ಭವನದ ಜೊತೆಜೊತೆಗೆ ಸಂಘದ ಸದಸ್ಯರ ಆರೋಗ್ಯವನ್ನು ಮನದಲ್ಲಿಟ್ಟುಕೊಂಡು ಸಮೂಹ ವಿಮೆಯ ಬೃಹತ್ ಯೋಜನಾ ಮಹತ್ಕಾಂಕ್ಷೆ ಇರಿಸಿದ್ದೇವೆ. ಇದು ಭವಿಷ್ಯತ್ತಿನ ದಿನಗಳಲ್ಲಿ ಸದಸ್ಯರಿಗೆ ವರದಾನ ಆಗಲಿದೆ ಎನ್ನುವ ಆಶಯ ನಮ್ಮದಾಗಿದೆ. ಪತ್ರಕರ್ತರ ಆರೋಗ್ಯದ ದೃಷ್ಠಿಯಿಂದ ಶ್ರಮಿಸುವ ಸಂಘ ಅಪತ್ಕಾಲದಲ್ಲಿ ಸದಸ್ಯರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಚಿಂತಿಸಿದೆ. ಪತ್ರಕರ್ತರ ಅಭ್ಯುದಯವೇ ಸಂಘದ ಉದ್ದೇಶ ಎಂದು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಪತ್ರಕರ್ತರ ಸಂಘದ ಪಂಚ ವಾರ್ಷಿಕ (5ನೇ) ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿ ಪತ್ರಕರ್ತರಿಗೆ ಜಾತಿಯಿಲ್ಲ. ಪತ್ರಿಕೋದ್ಯಮೇ ನಮ್ಮ ಸಮುದಾಯ. ಮುಂದಿನ ವಾರ್ಷಿಕ ಮಹಾಸಭೆಯನ್ನು ನಮ್ಮದೇ ಸ್ವಂತ ಭವನದಲ್ಲಿ ನಡೆಸುವ ಆಕಾಂಕ್ಷೆ ನಮ್ಮದಾಗಿದೆ. ಆದುದರಿಂದ ನಿಮ್ಮ ಹಿತಚಿಂತನೆಗೆ ನಾವು ಸಿದ್ಧರಾಗಿರುವಾಗ ಭವನ ಬೆಳೆಸುವ ಭಾವನೆ ನಿಮ್ಮಲ್ಲಿರಲಿ ಎಂದು ಪಾಲೆತ್ತಾಡಿ ಕರೆಯಿತ್ತರು.

ಬಳಿಕ ಪಾಲೆತ್ತಾಡಿ ಅವರು ಹಿರಿಯ ಪತ್ರಕರ್ತರುಗಳಾದ ನ್ಯಾ| ವಸಂತ ಎಸ್.ಕಲಕೋಟಿ, ಸಂಘದ ಸದಸ್ಯರಾಗಿದ್ದು ಭವನ ನಿರ್ಮಾಣಕ್ಕೆ ಬಹುಮೊತ್ತವನ್ನು ದೇಣಿಗೆಯನ್ನಿತ್ತ ಶಿವ ಎಂ.ಶೆಟ್ಟಿ ಮೂಡಿಗೆರೆ, ಬಂಟರವಾಣಿ ಮಾಸಿಕದ ಗೌರವ ಸಂಪಾದಕ ರತ್ನಾಕರ್ ಆರ್.ಶೆಟ್ಟಿ ಅವರನ್ನು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಹಾಗೂ ಸಂಸ್ಥೆಗೆ ಮಹತ್ವದ ಸಹಯೋಗ ನೀಡುತ್ತಿರುವ ಡಾ| ಸುರೇಶ್ ಎಸ್.ರಾವ್ ಕಟೀಲು, ಸಿಎ| ಐ.ಆರ್ ಶೆಟ್ಟಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ, ಡಾ| ಆರ್.ಕೆ ಶೆಟ್ಟಿ (ಎಲ್‍ಐಸಿ) ಅವರ ಅನನ್ಯ ಸೇವೆಯನ್ನು ಸ್ಮರಿಸಿ ಅಭಿವಂದಿಸಿದರು.

ಸಂಸ್ಥಾಪಕಾ ಗೌ| ಪ್ರಧಾನ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕವಾಗಿ ಮಾತನಾಡಿ ಭವನ, ಆರೋಗ್ಯ ನಿಧಿಯ ಯೋಜನೆ ಬರೇ ಸಂಘದ ಪದಾಧಿಕಾರಿಗಳ ಜವಾಬ್ದಾರಿ ಎನ್ನುವ ಸಂಕೋಚ ಮನೋಭಾವದಿಂದ ಮುಕ್ತರಾಗಿ ಏಕತೆಯ ಶಕ್ತಿಯನ್ನು ತೋರ್ಪಡಿಸಿರಿ. ತಮ್ಮಿಂದಾಗುವ ಅಳಿಲ ಸೇವೆಗೈದು ತಮ್ಮ ಋಣ ಸಂದಾಯಗೈಯಿರಿ. ಭವ್ಯ ಭವನಕ್ಕೆ ತಮ್ಮ ಕಿಂಚಿತ್ತಿನ ದೇಣಿಗೆಯನ್ನು ಒದಗಿಸಿ ಧಣ್ಯರೆಣಿಸಿ ಎಂದರು. ಆ ಬಳಿಕ ಬಂಟ್ವಾಳ್ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು.

ವೇದಿಕೆಯಲ್ಲಿ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಅಸೀನರಾಗಿದ್ದು, ಸಭಿಕ ಸದಸ್ಯರ ಪರವಾಗಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜನಾರ್ಧನ ಎಸ್.ಪುರಿಯಾ ಮತ್ತು ಗುರುದತ್ತ್ ಎಸ್.ಪೂಂಜಾ, ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ್ ಕಲಕೋಟಿ, ಸದಸ್ಯರುಗಳಾದ ಪ್ರೇಮನಂದ ಆರ್.ಕುಕ್ಯಾನ್, ನವೀನ್ ಕೆ.ಇನ್ನಾ ಮಾತನಾಡಿ ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿ ಸಂಸ್ಥೆಯು ಹಮ್ಮಿ ಕೊಂಡಿರುವ ಆರೋಗ್ಯನಿಧಿ ಮತ್ತು ಪತ್ರಕರ್ತರ ಭವನಕ್ಕೆ ಶುಭಹಾರೈಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಬು ಕೆ.ಬೆಳ್ಚಡ, ಸವಿತಾ ಎಸ್. ಶೆಟ್ಟಿ, ಕೆ.ಎನ್.ಸುರೇಶ್ , ಶ್ಯಾಮ್ ಎಂ.ಹಂಧೆ ಮತ್ತು ಲಾರೆನ್ಸ್ ಕುವೆಲ್ಲೋ ಹಾಜರಿದ್ದರು. ಸಭೆಯ ಆದಿಯಲ್ಲಿ ಸಂಸ್ಥೆಯ ಸಲಹಾಗಾರರಾಗಿದ್ದು ಇತ್ತೀಚೆಗೆ ಅಗಲಿದ ಪ್ರಸಿದ್ಧ ಪ್ರಾಧ್ಯಾಪಕ ಡಾ| ಸಂಜೀವ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮತ್ತು ಮೌನ ಪ್ರಾರ್ಥನೆಗೈದು ಆಗಲಿದ ಸರ್ವ ಪತ್ರಕರ್ತರಿಗೆ ಚಿರಶಾಂತಿ ಕೋರಲಾಯಿತು.

ಉಪಾಧ್ಯಕ್ಷ ದಯಾ ಸಾಗರ್ ಚೌಟ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಅವರು ವಾರ್ಷಿಕ ವರದಿಯನ್ನೂ ಜತೆ ಕೋಶಾಧಿಕಾರಿ ಪಿಲಾರು ಸುರೇಶ್ ಆಚಾರ್ಯ ಗತ ಸಾಲಿನ ಮಹಾಸಭೆ ಮತ್ತು ವಿಶೇಷ ಮಹಾಸಭೆ ವರದಿಯನ್ನು ವಾಚಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಸವಿತಾ ಸುರೇಶ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here