ಫೋಟೋ ರಹಿತ ವರದಿ ಸಪ್ಪೆಯಾಗಿರುತ್ತದೆ : ರೋನ್ಸ್ ಬಂಟ್ವಾಳ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜು.01: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ರಾನಡೆ ಭವನದ ಕನ್ನಡ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಿಮಿತ್ತ ಸಾಹಿತ್ಯ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು `ಸಂಪದಕೀಯ ಮಹತ್ವ ಹಾಗೂ ಬರವಣಿಗೆಯ ಕ್ರಮ’ ವಿಷಯವಾಗಿ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ `ಪತ್ರಿಕೆಗಳಲ್ಲಿ ಛಾಯಾಚಿತ್ರಗಳ ಮಹತ್ವ ಹಾಗೂ ಅಗತ್ಯತೆ’ ಬಗ್ಗೆ ಉಪನ್ಯಾಸ ನೀಡಿದರು.

ಚಂದ್ರಶೇಖರ ಪಾಲೆತ್ತಾಡಿ ಉಪನ್ಯಾಸ ನೀಡುತ್ತಾ ತಿಳುವಳಿಕೆಯೇ ಪತ್ರಕರ್ತರ ಶಕ್ತಿಯಾಗಿದ್ದು, ಇಂತಹವರ ಲೇಖನಿಯ ಪ್ರಜ್ಞಾವಂತ ಪತ್ರಕರ್ತರ ಬರವಣಿಗೆಯಿಂದ ಸಮಾಜವನ್ನು ತಿದ್ದಲು ಸಾಧ್ಯ. ಬುದ್ಧಿ ಜೀವಿಗಳಿಗೆ ಪತ್ರಿಕೆಗಳ ಸುದ್ದಿಗಳೇ ವಿಶ್ವಾಸನೀಯವಾಗಿದ್ದು ಆದುದರಿಂದ ಸತ್ಯಕ್ಕೆ ಹತ್ತಿರವಾದ ವಸ್ತುಸ್ಥಿಯನ್ನು ಪತ್ರಿಕೆಗಳು ಕೊಡಬೇಕು. ಪ್ರಸಕ್ತ ಪೀಳಿಗೆಯಲ್ಲಿನ ಓದುವ ಕೊರತೆ ಪತ್ರಿಕಾ ಕ್ಷೀಣತೆಗೆ ಕಾರಣವಾಗುತ್ತಿದ್ದರೂ ಪತ್ರಿಕೆಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ ಎಂದರು.

ಪತ್ರಿಕೆಗಳು ಸಮಾಜಕ್ಕೆ ಒಳಿತನ್ನು ನೀಡಬೇಕು. ಬರೇ ಟಿಆರ್‍ಪಿ ಲೆಕ್ಕಾಚಾರವನ್ನಾಗಿಸಿ ಪತ್ರಿಕೆಗಳನ್ನು ಬೆಳೆಸದೆ ವರದಿ ವಿಶ್ಲೇಷಣೆಗಳಿಂದ ಸಮಾಜ ತಿದ್ದುವ ಕಾಯಕದಲ್ಲಿ ತೊಡಗಿಸಿ ಕೊಳ್ಳಬೇಕು. ಕ್ರೈಮ್ ವರದಿಗಳಿಂದಲೇ ವಿಭೃಂಬಿಸದೆ ಓದುಗರ ಆಸಕ್ತಿಯತ್ತ ಒಲವು ಮೂಡಿಸು ಅಗತ್ಯ ಪತ್ರಿಕೆಗಳಿದೆ. ಪ್ರಸಕ್ತ ಮಾಧ್ಯಮಗಳನ್ನು ಕಲಿಯಲು ಮತ್ತು ಮುನ್ನಡೆಸಲು ಕಷ್ಟವಿಲ್ಲ ಎನ್ನುತ್ತಾ ಮುಂಬಯಿಯಲ್ಲಿನ ತುಳು-ಕನ್ನಡಿಗರ ಸಂಸ್ಥೆಗಳ ಸೇವೆಗೆ ಪತ್ರಿಕೆಗಳು ಸ್ಪಂದಿಸಿದ ಕಾರಣ ಇಲ್ಲಿನ ಬಡವರ ಸಂಖ್ಯೆ ಕ್ಷೀಣಿಸುವಂತಾಗಲು ಪತ್ರಿಕೆಗಳು ಪೂರಕವಾಗಿವೆ ಎಂದೂ ಪಾಲೆತ್ತಾಡಿ ತಿಳಿಸಿದರು.

ಫೋಟೋ ಗಳೇ ಪ್ರಸಕ್ತ ಪತ್ರಿಕೋದ್ಯಮದ ಕೃಷಿಗೆ ಪೂರಕವಾಗಿದ್ದು, ಅವಿಷ್ಕಾರಗಳ ಕಾಲಘಟ್ಟದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮುದ್ರಣ ಮಾಧ್ಯಮಗಳಿಗೆ ಸವಾಲೆಸೆಯುವ ಈ ಕಾಲಘಟ್ಟದಲ್ಲೂ ಫೋಟೋ ಗ್ರಾಫಿಯು ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ ಫೋಟೋ ಜರ್ನಲಿಸಂ ಮುದ್ರಣ ಮಾಧ್ಯಮಕ್ಕೆ ಶೋಭೆ ನೀಡುತ್ತದೆ. ಆದುದರಿಂದ ಕಾಲಚಕ್ರದಲ್ಲಿ ಛಾಯಾಚಿತ್ರಕಾರರೂ ದಕ್ಷತೆ ಮತ್ತು ನಿಸ್ಪೃಹತೆ ಕಾಯ್ದು ಕೊಳ್ಳುವಲ್ಲಿ ಸಫಲರಾಗಬೇಕು.ಜನರೂ ಇಂತಹ ಛಾಯಾಚಿತ್ರಕಾರರ ಗುಣ ವಿಶೇಷತೆ ಅರಿಯಬೇಕು ಎಂದು ರೋನ್ಸ್ ಬಂಟ್ವಾಳ್ ತಿಳಿಸಿದರು.

2007ರ ಜುಲೈನಲ್ಲಿ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಮುಂಬಯಿಯಲ್ಲಿ ಪ್ರಪ್ರಥಮ ಪತ್ರಿಕಾ ದಿನಾಚರಣೆ ಸಂಭ್ರಮಿಸಲು ಮಹಾನಗರದ ಬಹುತೇಕ ಕನ್ನಡ ಪತ್ರಕರ್ತರನ್ನು ಒಗ್ಗೂಡಿಸಿದ್ದೆವು. ಹಿರಿಯ ಪತ್ರಕರ್ತ ಕೆ.ಟಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಪತ್ರಿಕಾ ದಿನಾಚರಣೆ ಜರುಗಿ ನಮ್ಮೆಲ್ಲರ ಪಾಲಿಗೆ ಮಹತ್ವದ ದಿನವಾಯಿತು. ಆ ದಿನವೇ ಕನ್ನಡಿಗ ಪತ್ರಕರ್ತ ಸಂಘದ ಉದಯಕ್ಕೆ ಬುನಾದಿಯಾಯಿತು. ಫೋಟೋ ರಹಿತ ವರದಿ ಸಪ್ಪೆಯಾಗಿ ಪರಿಣಮಿಸುವ ಈ ಕಾಲದಲ್ಲಿ ವರದಿ ವಿಷಯಕ್ಕಿಂತ ಫೋಟೋ ಜರ್ನಲಿಸಂವೇ ಹೆಚ್ಚು ಆಕರ್ಷಣೀಯ ಆಗುತ್ತಿವೆ. ಆದುದರಿಂದಲೇ ಇಂದು ಬರಹ ವರದಿಕ್ಕಿಂತ ಛಾಯಾಚಿತ್ರದ ವರದಿಗೆ ಹೆಚ್ಚು ಮಹತ್ವವಿದೆ. ಯಾವುದೇ ಘಟನೆಗಳು ಛಾಯಾಚಿತ್ರದ ಸಹಿತ ಪ್ರಕಟವಾದಲ್ಲಿ ಅದು ವಿಜೃಂಭನೆಯ ವರದಿ ಆಗಬಲ್ಲದು. ಅದೇ ಹೆಚ್ಚು ಪ್ರಾಧಾನ್ಯತೆಯ ಸಮಾಚಾರವೆಣಿಸುತ್ತದೆ. ಫೋಟೋ ದಿಂದ ಅಚ್ಚಾದ ವರದಿ ಪ್ರತಿಷ್ಠೆಯದ್ದಾಗುತ್ತದೆ. ಮುದ್ರಣ ಮಾಧ್ಯಮಕ್ಕೆ ಒಂದೆಡೆ ಮೆರುಗು ನೀಡುವ ಫೋಟೋಗಳು ಮತ್ತೊಂದೆಡೆ ಮುಜುಗರಕ್ಕೂ ಕಾರಣವಾಗುತ್ತವೆ ಎಂದೂ ಬಂಟ್ವಾಳ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿದರು.

ಮುಂಬಯಿ ಪತ್ರಿಕೋದ್ಯಮ ಓದುಗರ ಉತ್ಸಹವಾಗಿದೆ. ಇಲ್ಲಿನ ಪತ್ರಿಕೋದ್ಯಮದಲ್ಲಿ ವಿಶೇಷವಾದ ಲೋಕಜ್ಞಾನ ಅಡಗಿದೆ. ವ್ಯಾಪಾಕ ಅನುಭವ ಮಾಧ್ಯಮದಿಂದ ಸಾಧ್ಯವಾಗಿದ್ದು ಟಿವಿ ಮಾಧ್ಯಮಕ್ಕಿಂತ ಪ್ರಿಂಟ್ ಮಾಧ್ಯಮ ಮಹತ್ವದಾಗಿದೆ. ಆದುದರಿಂದಲೇ ಪೈಪೋಟಿ ಕಾಣುತ್ತಾ ಪತ್ರಿಕೆಗಳು ಗಟ್ಟಿಯಾಗಿ ಬೆಳೆಯುತ್ತಿರುವ ಕಾರಣ ಪತ್ರಿಕೆಗಳಿಗೆ ಅಳಿಗಾಲವಿಲ್ಲ. ಜನರು ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವಕ್ಕೊಳಗಾದರೂ ಪತ್ರಿಕೆಗಳ ಓದುಗರು ಅಂತೂ ಹೆಚ್ಚುತ್ತಿದ್ದಾರೆ. ಮುಂಬಯಿ ಕನ್ನಡಿಗರ ಜಗತ್ತು ಪತ್ರಿಕೋದ್ಯಮದ ಸಂಪತ್ತು ಎಂದು ಡಾ| ಉಪಾಧ್ಯರು ಅಧ್ಯಕ್ಷೀಯ ನುಡಿಗಳನ್ನಾಡಿ ತಿಳಿಸಿದರು.

ಪತ್ರಕರ್ತ ಗುರುದತ್ತ್ ಎಸ್.ಪೂಂಜಾ, ಹರಿಜನ ಪರಸಪ್ಪ, ಅನಿತಾ ಎಸ್.ಶೆಟ್ಟಿ, ಆಶಾ ಕೆ.ಸುವರ್ಣ, ಸರೋಜಿನಿ ತರೆ, ಸುರೇಖಾ ದೇವಾಡಿಗ, ಶಿವರಾಜ್ ಎಂ.ಜಿ, ಗೀತಾ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು. ದುಗ್ರ್ಗಪ್ಪಯ ಕೋಟಿಯವರ್ ಸ್ವಾಗತಿಸಿದರು. ವೈ ಮಧುಸೂದನ್ ವಿ.ರಾವ್ ಅವರು ಪತ್ರಿಕೋದ್ಯಮದ ಹಿನ್ನಲೆಯನ್ನಾಗಿಸಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪತ್ರಿಕೆಗಳ ಪಾತ್ರ ಕುರಿತು ಮಾಹಿತಿಯನ್ನಿತ್ತರು. ಸುಶೀಲಾ ಎಸ್.ದೇವಾಡಿಗ ಕವಿತೆಯನ್ನು ಪ್ರಸ್ತುತ ಪಡಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್‍ಕುಮಾರ್ ವಳವೂರು ಧನ್ಯವದಿಸಿದರು.

LEAVE A REPLY

Please enter your comment!
Please enter your name here