ಕನ್ನಡ ಪ್ರಸಾರ ಮಾಧ್ಯಮಗಳಿಗೆ ಕನ್ನಡ ಸಮುದಾಯ ಕೃತಜ್ಞವಾಗಿರಲಿ – ಎಂ.ಬಿ ಕುಕ್ಯಾನ್.

ಮುಂಬಯಿ, ಮಾ.10: ಪತ್ರಕರ್ತರ ಸಂಘವು ಬರೇ ಐದು ವರ್ಷಗಳಲ್ಲಿ ಭವನ ರೂಪಿಸುವ ದೊಡ್ಡ ದಿಟ್ಟ ಯೋಜನೆ ಕೈಗೊಂಡದ್ದು, ಆ ನಿಟ್ಟಿನಲ್ಲಿ ಕಾರ್ಯನಿರತವಾದದ್ದು ನಿಜಕ್ಕೂ ಆಶ್ಚರ್ಯ, ಸಂತೋಷ ಮತ್ತು ಶ್ಲಾಘನೀಯ. ನಗರದ ಸಂಘ-ಸಂಸ್ಥೆಗಳು ಮುಂಬಯಿಯಲ್ಲಿನ ಪತ್ರಕರ್ತರು ಮತ್ತಿ ಪತ್ರಿಕಾ ಸಂಸ್ಥೆಗಳ ಲಾಭ ಮತ್ತು ಪ್ರಚಾರದ ಪ್ರಯೋಜನ ಪಡೆದಿದ್ದು, ಈ ಋಣಭಾರವನ್ನು ಮರಳಿಸಲು ಅವರೆಲ್ಲರಿಗೆ ಇದೊಂದು ಅಪೂರ್ವ ಅವಕಾಶ. ಅಂತೆಯೇ ಪತ್ರಿಕಾ ಭವನ ನಿರ್ಮಾಣ ಯೋಜನೆಯು ಪ್ರಚಾರ ಗಿಟ್ಟಿಸಿ ಕೊಂಡವರಿಗೆ ಋಣ ತೀರಿಸುವ ಅವಕಾಶವಾಗಿದ್ದು ಆ ಮೂಲಕ ಕನ್ನಡ ಪ್ರಸಾರ ಮಾಧ್ಯಮಗಳಿಗೆ ಕನ್ನಡ ಸಮುದಾಯ ಕೃತಜ್ಞವಾಗಿರಲಿ ಎಂದು ಮಹಾನಗರದಲ್ಲಿನ ಹಿರಿಯ ಪತ್ರಕರ್ತರೂ, ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಎಂ.ಬಿ ಕುಕ್ಯಾನ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಮಹಾರಾಷ್ಟ್ರದಲ್ಲಿನ ಕನ್ನಡಿಗ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುವ ರಾಷ್ಟ್ರ ಮನ್ನಣೆ ಪಡೆದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ವಿಶೇಷ ಮಹಾಸಭೆಯಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದ ಸಂಘದ ಪೋಷಕ ಸದಸ್ಯರೂ ಆದ ಕುಕ್ಯಾನ್ ಮಾತನಾಡಿ ನಾನು ಮುಂಬಯಿ ಬಂದಕಾಲಕ್ಕೆ ಮುಂಬಯಿಯಲ್ಲಿನ ತುಳು-ಕನ್ನಡಿಗರ ಸಂಸ್ಥೆಗಳಿಗೆ ಸ್ವಂತಃ ಜಾಗದ ಬಗ್ಗೆ ಯೋಜನೆ ಮಾಡಲು ದಶಕಗಳೇ ಹಿಡಿಯುತ್ತಿದ್ದವು. ಅಂತಹದರಲ್ಲಿ ಈ ಹಂಚಿ ತಿನ್ನುವ ಅಭ್ಯಾಸ ಸ್ನೇಹಮಯಿ ಬದುಕಿಗೆ ಪೂರಕವಾಗಿದ್ದು, ಇದನ್ನು ಪ್ರಚಾರ ಪಡೆದ ಗಣ್ಯರು ಪತ್ರಕರ್ತರೊಂದಿಗೆ ತಮ್ಮ ಗಳಿಕೆಯನ್ನು ಹಂಚಿಕೊಳ್ಳುವ ಭರವಸೆ ನನಗಿದೆ. ಆಮೂಲಕ ಸಂಘದ ಕನಸು ಬೇಗನೇ ನನಸಾಗಲಿ ಎಮ್ದು ಹಾರೈಸಿದರು.

ರಾಜ್ಯದಲ್ಲಿನ ಕನ್ನಡಿಗ ಪತ್ರಕರ್ತರ ಸೇವೆಯಲ್ಲಿ ಸಕ್ರೀಯವಾಗಿ ಸೇವಾ ನಿರತವಾಗಿ ಕನ್ನಡಿಗ ಪತ್ರಕರ್ತ ಸದಸ್ಯರುಗಳ, ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಲು, ಸಚಿವರು-ಗಣ್ಯರು ಸೇರಿದಂತೆ ನಗರದಲ್ಲಿನ ನೂರಾರು ಕನ್ನಡ ಸಂಘ-ಸಂಸ್ಥೆಗಳ ಅತ್ಯವಶ್ಯ ಪತ್ರಿಕಾಗೋಷ್ಠಿಗಳನ್ನು ನಡೆಸಲು, ನಗರಕ್ಕಾಗಮಿಸುವ ಅತಿಥಿü ಪತ್ರಕರ್ತರಿಗೆ ವಸತಿ ಒದಗಿಸುವರೇ `ಕನ್ನಡಿಗ ಪತ್ರಕರ್ತರ ಭವನ ಮುಂಬಯಿ’ ನಿರ್ಮಿಸಿ ಸದಸ್ಯರ ಆರೋಗ್ಯ ನಿಧಿಗಾಗಿ ಬೃಹತ್ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಮಹಾಸಭೆಯಲ್ಲಿ ಗೌರವ ಅತಿಥಿüಯಾಗಿ ಸಂಘದ ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ ಕಲಕೋಟಿ ಉಪಸ್ಥಿತರಿದ್ದು, ಸಂಘದ ಯೋಜನೆ ಮತ್ತು ಯೋಚನೆಯನ್ನು ಪ್ರಶಂಸಿಸಿ ಶುಭ ಕೋರಿದರು.

ನ್ಯಾ| ಕಲಕೋಟಿ ಮಾತನಾಡಿ ಈ ಮೊದಲೇ ಆಸ್ತಿತ್ವಕ್ಕೆ ಬರಬೇಕಾದ ಸಂಘದ ಕಾರ್ಯಾಲಯ ಈಗಲಾದರೂ ಭವ್ಯ ಭವನವಾಗಿ ಕಾರ್ಯರೂಪಕ್ಕೆ ಬರುತ್ತಿದೆ ಎಂದು ತಿಳಿದು ತುಂಬಾ ಸಂತೋಷವಾಗಿದೆ. ಯೋಜನೆಗೆ ನನ್ನ ಮನಪೂರ್ವಕ ಬೆಂಬಲವಿದ್ದು, ಇದು ಆದಷ್ಟು ಬೇಗ ರೂಪುಗೊಳ್ಳಲಿ ಎಂದರು.

ವೇದಿಕೆಯಲ್ಲಿ ಗೌ| ಕೋಶಾಧಿಕಾರಿ ಶ್ರೀಮತಿ ಜಿ.ಪಿ.ಕುಸುಮ ಆಸೀನರಾಗಿದ್ದು, ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ಎನ್.ಸುರೇಶ್, ಸವಿತಾ ಎಸ್. ಶೆಟ್ಟಿ, ಬಾಬು ಕೆ.ಬೆಳ್ಚಡ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಮತ್ತು ಶ್ಯಾಮ್ ಎಂ.ಹಂಧೆ ಉಪಸ್ಥಿತರಿದ್ದರು.

ಮುಂಬಯಿಯಲ್ಲಿನ ಕನ್ನಡಿಗ ಪತ್ರಕರ್ತರಿಗೆ ಪತ್ರಿಕಾ ಭವನ ಅವರ ಚಟುವಟಿಕೆಗಳಿಗೆ ಸಂಬಂಧಿಸಿ ತೀರಾ ಅನಿವಾರ್ಯ, ಅಗತ್ಯವಾಗಿದೆ. ಪತ್ರಿಕಾ ಭವನದಿಂದ ಮುಂಬಯಿಯಲ್ಲಿನ ಪತ್ರಿಕೋದ್ಯಮ ತನ್ನ ನೆಲೆಯನ್ನು ಭದ್ರಗೊಳಿಸಲಿದೆ ಮತ್ತು ತುಳು-ಕನ್ನಡಿಗ ಸಂಸ್ಥೆಗಳಿಗೂ ವರದಾನ ಆಗಲಿದೆ. ಉದಾರ ದಾನಿಗಳ ನೆರವಿನಿಂದ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಮುಂದುವರಿಸಲು ಹೊರಟ ಸಂಘದ ಯೋಜನೆಗಳು ಯೋಜನೆಯಂತೆಯೇ ಪೂರ್ಣವಾಗುವ ಭರವಸೆ ನಮಗಿದೆ. ಇದಕ್ಕೆ ಎಲ್ಲಾ ಸದಸ್ಯರ ಸಹಭಾಗಿತ್ವ ಅಷ್ಟೇ ಪ್ರಮುಖವಾಗಿದೆ ಎಂದು ಚಂದ್ರಶೇಖರ ಪಾಲೆತ್ತಾಡಿ ಅವರು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿದರು.

ಪತ್ರಕರ್ತರ ಭವನ, ಆರೋಗ್ಯ ನಿಧಿ ಯೋಜನೆಗಳ ಬೃಹತ್ ಯೋಚನೆಯ ಬಗ್ಗೆ ಸೂಕ್ತ ಸಲಹೆಗಳನ್ನೀಡಿದ ಸಿಎ| ಐ.ಆರ್ ಶೆಟ್ಟಿ, ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಡಾ| ಆರ್.ಕೆ.ಶೆಟ್ಟಿ (ಎಲ್‍ಐಸಿ), ಪದ್ಮನಾಭ ಕೆ.ಪೂಜಾರಿ ಮತ್ತು ಬಿಲ್ಡರ್ ಗ್ರೇಗರಿ ಎಲ್.ಡಿ’ಅಲ್ಮೇಡಾ ಅವರ ಮಾರ್ಗದರ್ಶನದ ಬಗ್ಗೆ ಉಪಾಧ್ಯಕ್ಷ ಕಳ್ಳಿಗೆ ದಯಾಸಾಗರ್ ಚೌಟ ವಿವರಿಸಿ ಕರ್ನಾಟಕದಿಂದ ವಲಸೆ ಬಂದ ಕನ್ನಡಿಗರು ಮುಂಬಯಿ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಇತರ ಎಲ್ಲಾ ರಂಗಗಳಲ್ಲಿ ತಮ್ಮ ಸಾಧನೆಗಳನ್ನು ದಾಖಲಿಸಿದಾಗ ಪತ್ರಿಕಾರಂಗವೂ ಅದಕ್ಕೆ ಹೊರತಾಗಿಲ್ಲ. ಆದರೆ ಸಾಮೂಹಿಕ ಭದ್ರತೆಯ ಸಾಧ್ಯತೆಯಿಲ್ಲದ ಪತ್ರಕರ್ತರಿಗೆ ಆಶ್ರಯವಾಗಿತ್ತಿರುವ ಈ ಸಂಸ್ಥೆ ಇದೀಗ ಭವನದ ಕನಸನ್ನು ಹೊಂದಿದ್ದು, ಇದಕ್ಕಾಗಿ ಕಾರ್ಯಕಾರಿ ಸಮಿತಿಯು ನಿವೇಶನವನ್ನು ಗುರುತಿಸಿದೆ. ನಿವೇಶನ ಖರೀದಿ ವಿತ್ತ ಸಂಗ್ರಹಣಾ ಬಾಧ್ಯತೆಗೆ ಸರ್ವರ ಸಹಕಾರ ಅವಶ್ಯವಿದೆ ಎಂದರು.

ಗೌರವ ಪ್ರಧಾನ ಕಾರ್ಯದರ್ಶಿರೋನ್ಸ್ ಬಂಟ್ವಾಳ್ ಪ್ರಸ್ತಾವಿಕ ಭಾಷಣಗೈದು, ಸಂಘದ ಯೋಜನೆಗಳು ಪತ್ರಕರ್ತರ ಭವಿಷ್ಯತ್ತಿನ ಬಾಳಿಗೆ ಆಶ್ರಯ-ಆಧಾರ ಆಗಬಹುದು ಎನ್ನುವ ಆಶಯ ನಮ್ಮದಾಗಿದೆ. ಸದಾ ನಿಮ್ಮದೇ ಕಾಳಜಿ ಸಂಸ್ಥೆಗಿದ್ದು, ನೀವೂ ಜವಾಬ್ದಾರಿಯ ಜೊತೆಗಾರರಾಗಿದ್ದಲ್ಲಿ ನಮ್ಮ ಯೋಜನೆಗಳು ಸಲೀಸಾಗಿ ರೂಪುಗೊಳ್ಳುವ ಭರವಸೆ ನಮಗಿದೆ. ಕೇಂದ್ರ ಸರಕಾರವು ಬಜೆಟ್‍ನಲ್ಲಿ ಎಫ್.ಎಂ ರೆಡಿಯೋ ಸ್ಥಾಪಿಸುವ ಕೇಂದ್ರಗಳಿಗೆ ಪ್ರೋತ್ಸಹ ನೀಡುತ್ತಿದ್ದಾರೆ. ಚಾಲಕರು, ನೈರ್ಮಲ್ಯ, ಗಣಿ ಕಾರ್ಮಿಕರು, ಚಿಂದಿ ಆಯುವ ಕೆಲಸದಾಳುಗಳ ಚಿಂತನೆ ಇರಿಸಿ ಅವರಿಗಾಗಿ ಸ್ವಾಸ್ಥ ್ಯ, ವಿಮಾ ಯೋಜನೆಯಡಿ ಆರೋಗ್ಯ ವಿಮೆ ಪ್ರಕಟಿಸಿದೆ. ಆದರೆ ಕಾರ್ಯನಿರತ ಪತ್ರಕರ್ತರ ಬಳವಳಿಕೆ ಇವರ ಗಮನಕ್ಕೆ ಬರುವುದಿಲ್ಲ ಎಂದರೆ ಇದು ಪತ್ರಕರ್ತರ ಬಾಳಿನ ದುರಂತವೇ ಸರಿ. ಇದಕ್ಕೆ ಪತ್ರಕರ್ತರಲ್ಲಿನ ಏಕತೆಯ ಕೊರತೆಯೇ ಕಾರಣವಾಗಿದೆ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿನಿವೇಶನ ಮಾರಾಟ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತ ಮಾಹಿತಿಯನ್ನು ನಾವು ಪರಿಶೀಲಿಸಿದ್ದು, ವಾಸ್ತವ್ಯ ಜಾಗ ಖರೀದಿ ಪೂರ್ವಪರ ದಾಖಲೆಗಳು ಮತ್ತು ಅದರ ಅಗತ್ಯಗಳ ಬಗೆಗಿನ ಮಾಹಿತಿಯನ್ನು ಮನಗಾಣಿಸಿ ಸಲಹಾ, ಕಾನೂನು ತಜ್ಞರ ಸಲಹೆಯಂತೆ ಯೋಜನೆಗೆ ಸ್ಪಂದಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.

ಸಭೆಯಲ್ಲಿ ಇತ್ತೀಚೆಗೆ ಸ್ವರ್ಗಸ್ಥರಾದ ಸಂಘದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಶೆಡ್ಡೆ ಸುರೇಂದ್ರ ಮಲ್ಲಿ, ಹಿರಿಯ ಪತ್ರಕರ್ತ ವಿಜಯ ಸಾರಥಿü ಮತ್ತು ಸನತ್ ಕುಮಾರ್ ರಾವ್ ಮೂಡಬಿದ್ರಿ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಸಭಿಕ ಸದಸ್ಯರುಗಳಲ್ಲಿ ನಿತ್ಯಾನಂದ ಡಿ.ಕೋಟ್ಯಾನ್, ನವೀನ್ ಕೆ.ಇನ್ನಾ, ಕಾರ್ಯಕಾರಿ ಸಮಿತಿ ಸದಸ್ಯ ಜನಾರ್ಧನ ಎಸ್. ಪುರಿಯಾ ಮಾತನಾಡಿ ತಮ್ಮ ಸೂಕ್ತವಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಂಘದ ಎಲ್ಲಾ ಯೋಜನೆಗಳು ಶೀಘ್ರವೇ ಸಲೀಸಾಗಿ ಫಲಪ್ರದವಾಗಲಿ ಎಂದು ಶುಭಹಾರೈಸಿದರು. ಜತೆ ಕಾರ್ಯದರ್ಶಿ ಪ್ರೇಮನಾಥ್ ಬಿ. ಶೆಟ್ಟಿ ಮುಂಡ್ಕೂರು ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here