ಮುಂಬಯಿ, ಆ.31: ಸದಸ್ಯರ ಟೀಕೆ ಟಿಪ್ಪಣಿಗಳು ಸಂಘಟನಾ ಬೆಳವಣಿಗೆಗೆ ಪೂರಕವಾಗಿದ್ದು, ಆರೋಗ್ಯದಾಯಕ ಚರ್ಚೆಗಳು ಸಂಸ್ಥೆಯ ಪೋಷಣೆಗೆ ಬಲವಾಗುತ್ತದೆ. ಸದಸ್ಯರು ಸಕ್ರೀಯರಾಗಿ ಕೇಳಿ ಉತ್ತರ ಪಡೆದಾಗ ಬೇಡಿಕೆಗಳು ಈಡೇರುತ್ತವೆ ಅಂತೆಯೇ ಸಂಘಗಳಲ್ಲಿ ಸಕ್ರೀಯರಾದರೆ ಸಂಬಂಧಗಳು ಬೆಳೆಯುತ್ತವೆ ಎಂದು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲಾ ಇಲ್ಲಿನ ಉತ್ಕರ್ಷ್ ನಗರದಲ್ಲಿನ ಕನ್ನಡಿಗ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಆರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಪಾಲೆತ್ತಾಡಿ ಮಾತನಾಡಿದರು.

ಪತ್ರಕರ್ತರ ಬದುಕು ನಿರೂಪಣೆ ನಮ್ಮ ಸಂಸ್ಥೆಯ ಗುರಿ ಆಗಿದ್ದು, ಸಂಸ್ಥೆಗಳ ಉದ್ಧಾರಕ್ಕೆ ಸದಸ್ಯರ ಸ್ಪಂದನೆ ಅತ್ಯವಶ್ಯವಾಗಿದೆ. ಸದಸ್ಯರ ಒಳ್ಳೆಯ ಟೀಕೆ ಟಿಪ್ಪಣಿಗಳಿರುವ ಸಭೆಯು ಯಾವೊತ್ತೂ ಫಲಪ್ರದವಾಗುತ್ತಿದ್ದು, ಪ್ರಶ್ನೋತ್ತರ ಕಲಾಪ ನಡೆದಾಗ ಮಾತ್ರ ಸಂಸ್ಥೆಗಳು ಪಾರದರ್ಶಕತ್ವದಿಂದ ಬೆಳೆಯಲು ಸಾಧ್ಯ. ಕಳೆದ ಮಹಾಸಭೆಯಲ್ಲಿ ಮುಂದಿನ ಮಹಾಸಭೆ ನಮ್ಮ ಪತ್ರಕರ್ತರ ಭವನದಲ್ಲಿ ನಡೆಯಬೇಕು ಎಂದು ಹೇಳಿದ್ದೆ. ನಿರೀಕ್ಷಿಸಿದ ಹಾಗೆ ಸಭೆ ಇಲ್ಲೇ ನಡೆಸಿದ್ದೇವೆ. ಸಂಘವು ಒಟ್ಟು 3 ಕೋಟಿಯ ಯೋಜನೆ ಹಾಕಿತ್ತು, 1 ಕೋಟಿ ಸದಸ್ಯರ ಆರೋಗ್ಯನಿಧಿಗಾಗಿ ಮತ್ತು 2 ಕೋಟಿ ರೂಪಾಯಿ ಭವನಕ್ಕೆ ಆದರೆ ಸದಸ್ಯರ ಸೂಕ್ತ ಸ್ಪಂದನೆ ಇಲ್ಲದೆ ಗುರಿ ಸಾಧನೆಯಾಗಿಲ್ಲ. ಆದರೂ ಶೀಘ್ರವೇ ಅರ್ಧ ಕೋಟಿ ರೂಪಾಯಿ ಸಂಗ್ರಹ ಪ್ರಸ್ತಾಪವಿದೆ. ಆರೋಗ್ಯನಿಧಿ ಯೋಜನೆಗೆ ಹಣಬೇಕು. ಇದಕ್ಕಾಗಿ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಸಂಗ್ರಹಿತ ಮೊತ್ತದಿಂದ ಕನಿಷ್ಟ 2.5 ಲಕ್ಷ ರೂಪಾಯಿ ವಾರ್ಷಿಕ ಬಡ್ಡಿ ಬಂದರೆ ಈ ಹಣದಿಂದ ಸದಸ್ಯರಿಗೆ ವೈದ್ಯಕೀಯ ನೆರವು ನೀಡಬಹುದು. ನಮ್ಮಲ್ಲಿನ ಯಾವನೇ ಪತ್ರಕರ್ತರ ಆರೋಗ್ಯ ಸಮಸ್ಯೆ ಉಂಟಾದರೆ ಈ ಸಂಘ ಯಾವತ್ತೂ ಬಿಟ್ಟು ಹಾಕುವುದಿಲ್ಲ. ನಮ್ಮಲ್ಲಿ ಬಂಡವಾಳವಿದ್ದರೆ, ಧೈರ್ಯ ಬರುತ್ತದೆ ಎಂದೂ ಪತ್ರಕರ್ತರಿಗೆ ಕಿವಿಮಾತುಗಳನ್ನಾಡಿದರು. ಸಂಘದ ಯೋಜನೆಗಳಿಗೆ ಅನೇಕರು ವಿಶ್ವಾಸದಿಂದ ಉದಾರತೆ ಮೆರೆದಿದ್ದಾರೆ ಭವಿಷ್ಯತ್ತಿನಲ್ಲೂ ಆತ್ಮೀಯವಾಗಿ ಸ್ಪಂದಿಸುವ ಆಶಯ ನಮ್ಮಲ್ಲಿದೆ ಎಂದರು.

ವೇದಿಕೆಯಲ್ಲಿ ಸಂಘದ ಸಲಹಾ ಸಮಿತಿಯ ಸದಸ್ಯರುಗಳಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಸುನೀತಾ ಎಂ.ಶೆಟ್ಟಿ ಹಿರಿಯ ಪತ್ರಕರ್ತ, ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ್ ಕಲಕೋಟಿ ಅಸೀನರಾಗಿದ್ದು, ಲೆಕ್ಕ ಪರಿಶೋಧಕರನ್ನಾಗಿ ಸಂಘದ ಸಲಹಾ ಸಮಿತಿಯ ಸದಸ್ಯರೂ ಆದ ಸಿಎ| ಐ.ಆರ್ ಶೆಟ್ಟಿ ಅವರ ಶೆಟ್ಟಿ ಎಂಡ್ ಸೊಮಾನಿ ಚಾರ್ಟರ್ಡ್ ಅಕೌಂಟನ್ಟ್ಸ್ (ಎಂ.ಎಸ್ ಶೆಟ್ಟಿ ಪಾರ್ಟ್‍ನರ್) ಸಂಸ್ಥೆಯನ್ನು ನೇಮಿಸಲಾಯಿತು.

ಸಂಸ್ಥಾಪಕಾ ಗೌ| ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದು ಈ ಭವನ ಪತ್ರಕರ್ತರ ಮನೆಯಂತೆ. ಇಲ್ಲಿ ನಾವೆಲ್ಲರೂ ಒಂದೇ ಪರಿವಾರ ಇದ್ದಂತೆ. ಪರಸ್ಪರ ಸಹಬಾಳ್ವೆ, ಅನ್ಯೋನ್ಯತಾ ಬದುಕು ಬೆಳೆಸಿ ಕೊಳ್ಳುವ ಅಗತ್ಯವಿದ್ದು ಈ ಭವನವು ಪತ್ರಕರ್ತರ ಪಾಲಿನ ಆರೋಗ್ಯ ಭವನವಾಗಿಯೋ ಸೇವೆ ಸಲ್ಲಿಸಬೇಕಾಗಿದೆ ಎಂದರು. ಪತ್ರಕರ್ತ ಭವನಕ್ಕೆ ನೆರವು ಕೋರಿ ಇದೀಗಲೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಹಲವಾರ ಸಚಿವರುಗಳನ್ನು, ಸಿಎಂ ಮಾಧ್ಯಮ ಸಲಹಾಗಾರ ದಿನೇಶ್ ಅಮೀನ್ ಮಟ್ಟು, ಸ್ಪೀಕರ್ ಡಿ.ಹೆಚ್ ಶಂಕರಮೂರ್ತಿ ಅವರ ಭೇಟಿ ಬಗ್ಗೆ ವಿವರಿಸಿದರು. ಸಂಸ್ಥೆಗೆ ಸದಾ ಅತ್ಮೀಯರಾಗಿ ಸ್ಪಂದಿಸಿ ಪತ್ರಕರ್ತರ ಆರೋಗ್ಯಭಾಗ್ಯದ ಕಾಳಜಿ ವಹಿಸುವ ಡಾ| ಸುರೇಶ್ ಎಸ್.ರಾವ್ ಕಟೀಲು, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಡಾ| ಭರತ್ ಶ್ಹಾ, ಡಾ| ಪ್ರಶಾಂತ್ ಜೆ. ರಾಜ್‍ಪುತ್ ಮತ್ತು ಸಂಘದ ಶ್ರೇಯೋಭಿವೃದ್ಧಿಗಾಗಿ ಸದಾ ಸ್ಪಂದಿಸುವ ಸಲಹಾಗಾರರುಗಳಾದ ಸಿಎ| ಐ.ಆರ್ ಶೆಟ್ಟಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಗ್ರೆಗೋರಿ ಡಿ’ಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಹಿತೈಷಿ ಸುಧಾಕರ್ ಉಚ್ಚಿಲ್ ಸೇರಿದಂತೆ ಭವನಕ್ಕೆ ಉದಾರ ದೇಣಿಗೆ, ಧನಸಹಾಯ ನೀಡಿ ಸಹಕರಿಸಿದ ಸರ್ವರ ಅನನ್ಯ ಸೇವೆಯನ್ನು ಸ್ಮರಿಸಿ ಅಭಿವಂದಿಸಿದರು.

ನ್ಯಾ| ಮೋಹಿದ್ಧೀನ್ ಮಾತನಾಡಿ ಸಂಘದ ಸ್ವಂತಿಕೆಯ ಸಭಾಂಗಣದಲ್ಲಿ ನಡೆಯುವ 6ನೇ ವಾರ್ಷಿಕ ಮಹಾಸಭೆ ನೋಡಿ ತುಂಬಾ ಸಂತೋಷವಾಗುತ್ತದೆ. ಮುಂಬರುವ ದಿನಗಳಲ್ಲಿ ದೊಡ್ಡ ಸಭಾಗೃಹ ತೆರೆದು ದೊಡ್ಡ ಮಟ್ಟದಲ್ಲಿ ಸಂಘವು ಬೆಳೆಯಲಿ. ನಿಮ್ಮೆಲ್ಲರ ಆರೋಗ್ಯ ನಿಧಿಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಎಲ್ಲರೂ ಕನ್ನಡಾಂಭೆಯ ಮಕ್ಕಳಾಗಿ ನೆಮ್ಮದಿಯಿಂದ ಬಾಳುವಂತಾಗಲಿಎಂದರು.

ಛಲ ಹಿಡಿದರೆ ಸಲಕ ಸಾಧನೆ ಎನ್ನುವುದನ್ನು ಈ ಸಂಘ ಮಾಡಿ ತೋರಿಸಿದೆ. ಇಷ್ಟೊಂದು ಕನಿಷ್ಟ ಕಾಲಾವಧಿಯಲ್ಲಿ ಪತ್ರಕರ್ತರ ಸಂಘದ ಭವನ ಕಾರ್ಯರೂಪಕ್ಕೆ ಬಂತೆನ್ನುವುದೇ ಸಂತೋಷ. ಎಲ್ಲರ ಸಹಕಾರ ಇದಕ್ಕೆ ಪ್ರೋತ್ಸಾಹಕ. ಪತ್ರಕರ್ತರು ಪ್ರಭಾವಶಾಲಿ ಅಸ್ತ್ರ. ಇದನ್ನು ಕಾಯ್ದುಕೊಳ್ಳಲು ನೈತಿಕ ಹೊಣೆ ಹೋರಿಸಿ ಕೊಳ್ಳಲು ಪತ್ರಕರ್ತರು ಸಿದ್ಧರಾಗಬೇಕು. ಇದನ್ನು ಮುನ್ನಡೆಸಲು ಎಲ್ಲರ ಸಹಯೋಗ ಅತ್ಯವಶ್ಯಕ. ಸಂಘದ ಸಾಂಘಿಕ ಕಾಯಕ ಇನ್ನಷ್ಟು ನಡೆಯಲಿ. ಉತ್ತರೋತ್ತರ ಪ್ರಗತಿ ಸಾಧಿಸಲಿ ಎಂದು ಡಾ| ಸುನೀತಾ ಶೆಟ್ಟಿ ತಿಳಿಸಿದರು.

ನ್ಯಾ| ವಸಂತ್ ಕಲಕೋಟಿ ಮಾತನಾಡಿ ಸಂಘವು ವೇಗವಾಗಿ ಅಭಿವೃದ್ಧಿಯ ಕಡೆ ಸಾಗುತ್ತಿದೆ. ಒಂದೂವರೆ ವರ್ಷದಲ್ಲಿ ಪತ್ರಕರ್ತರ ಭವನದ ಖರೀದಿ ರಿಜಿಸ್ಟ್ರೇಶನ್ ಆಯ್ತು. ಕಳೆದ ವರ್ಷ ಅಧ್ಯಕ್ಷರು ಮುಂದಿನ ವಾರ್ಷಿಕ ಸಭೆ ನಮ್ಮ ಸಂಘದಲ್ಲಿ ಆಗಬೇಕು ಎಂದು ಹೇಳಿದ್ದರು ಅವರು ಹೇಳಿದಂತೆ ಆಯ್ತು, ಇದೊಂದು ಆಸಾಮಾನ್ಯ ಸಾಧನೆ. ಇವತ್ತು ಮುಂಬಯಿ ಕನ್ನಡ ಪತ್ರಕರ್ತರಿಗೆ ತಮ್ಮದೇ ಆದ ಜಾಗವಿದೆ. ಭವಿಷ್ಯತ್ತಿನಲ್ಲಿ ಆರೋಗ್ಯ ನಿಧಿಗೆ ಸಾಕಷ್ಟು ಪ್ರೋತ್ಸಾಹ, ಸಹಕಾರಬೇಕು. ಇದು ನೇರವೇರಲಿ ಎಂದು ಶುಭಾಶಯ ಸಲ್ಲಿಸಿದರು.

ಉಪಸ್ಥಿತ ಸಂಘದ ಸದಸ್ಯರೂ, ಉದ್ಯಮಿಗಳಾದ ಶಿವ ಶೆಟ್ಟಿ ಮೂಡಿಗೆರೆ, ಪದ್ಮನಾಭ ಪಿ.ಪೂಜಾರಿ, ಮಹೇಶ್ ಕಾರ್ಕಳ್ (ಬಿಲ್ಲವರ ಅಸೋಸಿಯೇಶನ್ ಗೌರವಾರ್ಥ) ಮತ್ತಿತರರನ್ನು ಅಧ್ಯಕ್ಷರು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.

ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಾರೆನ್ಸ್ ಕುವೆಲ್ಲೋ, ಸವಿತಾ ಎಸ್.ಶೆಟ್ಟಿ, ಶ್ಯಾಮ್ ಎಂ. ಹಂಧೆ, ಗುರುದತ್ತ್ ಎಸ್.ಪೂಂಜಾ, ಜನಾರ್ಧನ ಎಸ್.ಪುರಿಯಾ ಮತ್ತು ಸಂಘದ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಹಾಜರಿದ್ದು, ಸಭಿಕ ಸದಸ್ಯರ ಪರವಾಗಿ ನಾಗೇಶ್ ಪೂಜಾರಿ ಏಳಿಂಜೆ, ಜನಾರ್ಧನ ಪುರಿಯಾ, ಸುರೇಶ್ ಶೆಟ್ಟಿ ಯೆಯ್ಯಡಿ ಮಾತನಾಡಿದರು.

ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಯು.ಆರ್ ಅನಂತಮೂರ್ತಿ, ಅಶೋಕ್ ಬಗಂಬಿಲ, ಟಿವಿ9 ಮಾಧ್ಯಮದ ಲಾರೇನ್ಸ್ ಡಿ’ಸೋಜಾ ಮೂಡಬಿದ್ರೆ, ಸನ್ಮಾರ್ಗ ಸಾಪ್ತಾಹಿಕದ ಗೌರವ ಸಂಪಾದಕ ಪಿ.ನೂರ್ ಮಹಮ್ಮದ್ ಅವರಿಗೆಲ್ಲರಿಗೂ ಮೌನ ಪ್ರಾರ್ಥನೆಗೈದು ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘದ ಜತೆ ಕೋಶಾಧಿಕಾರಿ ಪಿಲಾರು ಸುರೇಶ್ ಆಚಾರ್ಯ ಸ್ವಾಗತಿಸಿದರು. ಗೌ| ಕಾರ್ಯದರ್ಶಿ ಹರೀಶ್ ಕೆ. ಹೆಜ್ಮಾಡಿ ಸಭಾ ಕಲಾಪಗಳನ್ನು ನಿರ್ವಾಹಿಸಿದರು. ಉಪಾಧ್ಯಕ್ಷ ದಯಾ ಸಾಗರ್ ಚೌಟ ಗತ ಮಹಾಸಭೆಯ ವರದಿ ಪ್ರಸ್ತಾಪಿಸಿದರು. ಜತೆ ಕಾರ್ಯದರ್ಶಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಬಾಬು ಕೆ.ಬೆಳ್ಚಡ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆಯು ಸಮಾಪ್ತಿಗೊಂಡಿತು.

LEAVE A REPLY

Please enter your comment!
Please enter your name here